ಫೆಕ್ನರ್, ಗುಸ್ಟಾಫ್ ತೀಯೊಡೋರ್
	1801-87. ಮನಃಶಾಸ್ತ್ರಜ್ಞ. ಐರೋಪ್ಯ ವಿಜ್ಞಾನಯುಗದ ಪರ್ವಕಾಲದಲ್ಲಿದ್ದವ. ಜೀವಮಾನದ ಬಹುಭಾಗವನ್ನು ಐರೋಪ್ಯ ಸಂಸ್ಕøತಿಗೆ ತೌರೂರೆನಿಸಿದ್ದ ಲೈಪ್‍ಸಿಕ್‍ನಲ್ಲಿ ಕಳೆದ. ಬಡತನದಲ್ಲಿ ಬೆಳೆದು ವೈದ್ಯವೃತ್ತಿಗಾಗಿ ಶಿಕ್ಷಣ ಪಡೆದು, ಅದರ ಬಗ್ಗೆ ಉದಾಸೀನನಾಗಿ ಭೌತಿಕ, ದೈಹಿಕ, ಮಾನಸಿಕ ಸಂಶೋಧನೆಗಳಲ್ಲಿ ನಿರತನಾದ. ವಿಶೇಷವಾಗಿ ಮನಃಶಾಸ್ತ್ರದ ಪ್ರಯೋಗಗಳ ಬಗ್ಗೆ ಗಮನವಿತ್ತ. ಅಲ್ಲಿಂದ ಮುಂದೆ ಮರಣಾನಂತರ ಜೀವನ, ವಿಶ್ವವ್ಯಾಪಿ ತತ್ತ್ವ, ಜೆಂಡವೆಸ್ತ, ಸೌಂದರ್ಯ ಮೀಮಾಂಸೆ ಇವುಗಳಲ್ಲಿ ಅನುರಕ್ತನಾದ. ಇವನ ಯಶಸ್ಸೆಲ್ಲ ಈತ ಬರೆದ ಸೈಕೋಫಿಸಿಕ್ (1850) ಎಂಬ ಪ್ರಯೋಗ ಸಿದ್ಧವಾದ ಜಿಜ್ಞಾಸಾ ಗ್ರಂಥವನ್ನು ಅವಲಂಬಿಸಿದೆ. ಇದರಲ್ಲಿ ಜೀವಿಯ ಜೀವನ ವ್ಯವಸ್ಥೆಯೇ ಪ್ರಾಣ, ಪ್ರಾಣ ಗುಣವಿಶಿಷ್ಟವಾದ ರಚನೆ ಜೀವಿಯ (ಮನುಷ್ಯನ) ಚಿತ್ರವೂ ರಚನೆಯ ಅಂಗವಾದುದರಿಂದ ಭೌತಿಕಸಂವಿಧಾನಗಳಿಂದ ಅದನ್ನು ಅಳೆಯುವುದು ಸಾಧ್ಯ ಎಂದು ವಾದಿಸಿದ್ದಾನೆ. ಈ ಗ್ರಂಥಕ್ಕೆ ಸ್ಪೂರ್ತಿಯನ್ನಿತ್ತವ ವೆಬರ್; ಸ್ಪರ್ಶ, ದರ್ಶನ, ಶ್ರವಣಗಳ ವಿಚಾರವಾಗಿ ವೆಬರ್ ನಡೆಸಿದ ಸಂಶೋಧನೆಗಳ ಆಧಾರದ ಮೇಲೆಯೇ ಫೆಕ್ನರ್ ತನ್ನ ನಿಲವನ್ನು ಸ್ಪಷ್ಟಪಡಿಸಿದ. ಹೊರಗಿನ ಪ್ರೇರಕಗಳಿಗೂ ಒಳಗಿನ ಸಂವೇದನೆಗಳ ಸಂತತಿಗೂ ನಡುವೆ ಇರುವ ಸಂಬಂಧವನ್ನು ನಿರೂಪಿಸುವ ವೆಬರ್_ಫೆಕ್ನರ್ ನಿಯಮ ಎಂಬ ತತ್ತ್ವ ಪ್ರಸಿದ್ದವಾಗಿದೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ